ಬೆಂಗಳೂರು: ಅರ್ಕಾವತಿ ಹಗರಣದಿಂದ ಸಿದ್ದರಾಮಯ್ಯ ಪಾರಾಗಲು ಸಾಧ್ಯವೇ ಇಲ್ಲ. ಹೋರಾಟದ ಮೂಲಕ ತಾತ್ವಿಕ ಅಂತ್ಯ ಕಾಣಿಸುತ್ತೇವೆ ಎಂದು ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಗುಡುಗಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು ಅಥವಾ ನಾಳೆ ರಾಜ್ಯಪಾಲರು ದೂರು ಆಲಿಸಲು ಅನುಮತಿ ಕೊಡಬಹುದು. ಪ್ರಾಸಿಕ್ಯೂಶನ್‍ಗೆ ಅನುಮತಿ ಸಿಕ್ಕ ಕೂಡಲೇ ಪ್ರಕರಣ ದಾಖಲಿಸಲಾಗುತ್ತದೆ. ನಮ್ಮ ಲೀಗಲ್ ಸೆಲ್‍ನ ನಟರಾಜ್ ಶರ್ಮ ಮತ್ತು ಹಿರಿಯ ವಕೀಲ ದೊರೆರಾಜ್ ಅವರು ಮಾಹಿತಿಯೊಂದಿಗೆ ಸಿದ್ಧರಾಗಿದ್ದಾರೆ. ಅದೇ ರೀತಿ ಕೆಂಪಣ್ಣ ಆಯೋಗಕ್ಕೂ ಸಂಬಂಧಪಟ್ಟ ಮಾಹಿತಿ ನೀಡಲಾಗಿದೆ. ಎಲ್ಲಾ ಕಡೆಯಿಂದಲೂ ನಮ್ಮ ಹೋರಾಟ ನಡೆಯುತ್ತಿದೆ ಎಂದರು. ರಾಜ್ಯಪಾಲರು ನಮ್ಮ ಲೀಗಲ್‍ಸೆಲ್‍ನವರ ಭೇಟಿಗೆ ಅನುಮತಿ ಕೊಟ್ಟಿಲ್ಲ. ಈ ವಿಚಾರದಲ್ಲಿ ನಾವು ರಾಜಕೀಯ ಮಾಡುವುದು ಅಥವಾ ಒತ್ತಡ ಹೇರಲು ಇಚ್ಛಿಸುವುದಿಲ್ಲ. ಅನುಮತಿ ನೀಡುವುದು ಬಿಡುವುದು ರಾಜ್ಯಪಾಲರ ವಿವೇಚನೆಗೆ ಬಿಟ್ಟ
ವಿಚಾರ ಎಂದ ಅವರು, ಅನುಮತಿ ಕೊಟ್ಟೇ ಕೊಡುತ್ತಾರೆಂಬ ವಿಶ್ವಾಸವಿದೆ. ಭೇಟಿಗಾಗಿ ಕೋರಿಕೆಯನ್ನು ನಾವು ವಾಪಸ್ ಪಡೆದಿಲ್ಲ ಎಂದು ಸ್ಪಷ್ಟಪಡಿಸಿದರು. ರಾಜ್ಯಪಾಲರ ನಡೆಯ ಬಗ್ಗೆ ನಾವು ಪ್ರತಿಕ್ರಿಯೆ ನೀಡುವುದಿಲ್ಲ. ಆದರೆ, ಅರ್ಕಾವತಿ ವಿಚಾರ ಸಾಕಷ್ಟು ಚರ್ಚೆಯಾಗುತ್ತಿದೆ, ಪತ್ರಿಕೆಗಳಲ್ಲೂ ವಿಚಾರ ಪ್ರಸ್ತಾಪವಾಗಿರುವಾಗ ರಾಜ್ಯಪಾಲರಿಗೆ ಎಲ್ಲವೂ ಗಮನಕ್ಕಿದೆ ಎಂದು ಭಾವಿಸುತ್ತೇನೆ ಎಂದರು. ಪ್ರಕರಣವನ್ನು ಸಿಐಡಿಗೆ ವಹಿಸಿ ಎಂಬುದು ನಮ್ಮ ಆಗ್ರಹವಾಗಿತ್ತು. ಆದರೆ, ಸರ್ಕಾರ ನ್ಯಾಯಾಂಗ ಆಯೋಗ ರಚಿಸಿತು. ಅಲ್ಲಿಗೂ ದಾಖಲೆ ಕೊಡುವುದರ ಜೊತೆಗೆ ಸಾಕ್ಷ್ಯ ಹೇಳಲೂ ಸಿದ್ಧದ್ದೇನೆ ಎಂದು ಹೇಳಿದರು. ಕಾಂಗ್ರೆಸ್ ಪಕ್ಷದವವರು ಅರ್ಕಾವತಿ ವಿಚಾರದಲ್ಲಿ ತಾವು ಒಂದು ವರದಿ ಬಿಡುಗಡೆ ಮಾಡಬೇಕಲ್ಲ ಎಂಬ ಕಾರಣಕ್ಕೆ ಒಂದು ವರದಿ ಬಿಡುಗಡೆ ಮಾಡಿದರು, ಅದನ್ನು ಓದಿ ನೋಡಿದೆ, ಅದರಲ್ಲಿ ಏನೂ ಇಲ್ಲ. ಅನೇಕ ಭವಿಷ್ಯ ನುಡಿದ್ದಾರೆ ಎಂದು ಲೇವಡಿ ಮಾಡಿದರು
ಸರ್ಕಾರ ಇದೆಯೋ , ಇಲ್ಲವೋ?
ಬೆಂಗಳೂರು: ರಾಜ್ಯದಲ್ಲಿ ಆಡಳಿತ ಸಂಪೂರ್ಣ ಧರಾಶಾಯಿಯಾಗಿದೆ. ಮುಖ್ಯಮಂತ್ರಿಗೆ ಸರ್ಕಾರದ ಮೇಲೆ ಯಾವುದೇ ಹಿಡಿತವಿಲ್ಲ, ಮಂತ್ರಿಗಳಿಗೆ ಸಿಎಂ ಮೇಲೆ ನಂಬಿಕೆ
ಇಲ್ಲ, ಮಂತ್ರಿಗಳು ಹಾಗೂ ಸಿಎಂ ಮೇಲೆ ಕಾಂಗ್ರೆಸ್ ಶಾಸಕರಿಗೆ ನಂಬಿಕೆ ಇಲ್ಲ. ಇನ್ನೊಂದೆಡೆ ಮಂತ್ರಿಗಳು ವಿಧಾನಸೌಧದಿಂದ ದೂರ ಉಳಿದಿದ್ದು,
ಜನರು ಪರದಾಡುವಂತಾಗಿದೆ ಎಂದು ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಗಂಭೀರ ಆರೋಪ ಮಾಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನಸೌಧದಲ್ಲಿ ಯಾವುದೇ ಮಂತ್ರಿಗಳ ಕಚೇರಿಗೆ ಹೋದರೂ ಮಂತ್ರಿ ಸಿಗುತ್ತಿಲ್ಲ. ದೂರದೂರುಗಳಿಂದ ಅರ್ಜಿ ಹಿಡಿದು ಬರುವ ಸಾರ್ವಜನಿಕರಿಗೆ ಸ್ಪಂದನೆ ಇಲ್ಲವಾಗಿದೆ. ಸಚಿವರು ಬಜೆಟ್ ತಯಾರಿಯಲ್ಲಿದ್ದಾರೆ ಎಂಬ ಉತ್ತರ ಸಿಗುತ್ತದೆ. ಆದರೆ, ಬಜೆಟ್ ಸಭೆಗಳಲ್ಲೂ ಸಚಿವರು ಇಲ್ಲ. ಅಧಿಕಾರಿಗಳು ಕಚೇರಿಯಲ್ಲಿಲ್ಲ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗಿದೆ ಎಂದರು. ಸರ್ಕಾರದ ಮೇಲೆ ಮುಖ್ಯಮಂತ್ರಿ ಯವರಿಗೆ ಹಿಡಿತ ಇಲ್ಲ ಎಂಬು ದಕ್ಕೆ ಸಚಿವರು ನೀಡುವ ಹೇಳಿಕೆಗಳೇ ಸಾಕ್ಷಿ ಎಂದರು. ರಾಜ್ಯದ ವಿವಿಧ ಕಡೆಗಳಲ್ಲಿ ಕುಡಿವ ನೀರಿನ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಜಿಲ್ಲಾಧಿಕಾರಿ, ಸಿಇಓ, ಉಸ್ತುವಾರಿ ಸಚಿವರು ಈಗಲೇ ಎಚ್ಚೆತ್ತುಕೊಳ್ಳದೇ ಹೋದರೆ ಸಮಸ್ಯೆ ಇನ್ನಷ್ಟು ಬಿಗಡಾಯಿಸಬಹುದು ಎಂದ ಶೆಟ್ಟರ್, ಕೂಡಲೇ ಈ ಸಂಬಂಧ ಗಮನಿಸುವಂತೆ ಸರ್ಕಾರವನ್ನು ಆಗ್ರಹಿಸುವುದಾಗಿ ತಿಳಿಸಿದರು.